Centre for Internet & Society

An article by Hari Prasad Nadig on Wiki Academy, a workshop based on usage of Indian languages, editing and its applications in academics of Wikipedia - the free online encyclopedia, was held at Eric Mathias hall in St Aloysius College in Mangalore on Saturday, August 22.

 Where the mind is without fear and the head is held high;

Where knowledge is free; - Rabindranath Tagore

 ಜ್ಞಾನವೆಂಬುದು ಯಾರೊಬ್ಬರ ಸೊತ್ತಲ್ಲ. ಅದು ಎಲ್ಲರದೂ ಆಗಬೇಕು. ಮಾನವಕುಲದ ಒಟ್ಟು ಅರಿವು ಪ್ರತಿಯೊಬ್ಬರಿಗೂ ಸಿಗಬೇಕು, ಜ್ಞಾನವನ್ನು ಮುಚ್ಚಿಟ್ಟು ಅಥವ ಹಿಡಿದಿಟ್ಟು ಪ್ರಯೋಜನವಿಲ್ಲ. ಹಂಚಿಕೊಂಡ ಜ್ಞಾನ ಮತ್ತಷ್ಟು ಬೆಳೆಯುತ್ತದೆ - ಇದು ಒಂದು ರೀತಿಯಲ್ಲಿ ವಿಕಿಪೀಡಿಯ ಯೋಜನೆಯ ಹಿಂದಿರುವ ಸಿದ್ಧಾಂತ.

ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಎಲ್ಲರೂ ತಮ್ಮ ಅರಿವು ಹಂಚಿಕೊಳ್ಳಬಹುದಾದ ವಿಶ್ವಕೋಶ. ಯಾರೊಬ್ಬರೂ ಎಡಿಟ್ ಮಾಡಬಹುದಾದ ಪುಟಗಳ ಗುಚ್ಛ. ಇದನ್ನು ನಡೆಸುವುದು ಜಗತ್ತಿನಾದ್ಯಂತ ತಮಗರಿವಿರುವ ವಿಷಯಗಳನ್ನು ಹಂಚಿಕೊಳ್ಳುತ್ತ ತಾವೂ ಹೊಸ ವಿಷಯಗಳನ್ನು ಅರಿತುಕೊಳ್ಳಲು ಉತ್ಸುಕರಾಗಿರುವ ಆಸಕ್ತರ ಸಮುದಾಯ. ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಅಂತರ್ಜಾಲದ ಅತ್ಯಂತ ಪ್ರಮುಖ ವೆಬ್ಸೈಟುಗಳಲ್ಲಿ ಒಂದಾದ ಯೋಜನೆ ಇದು. ಅಂತರ್ಜಾಲದಲ್ಲಿ ಇಂದು ಅತ್ಯಂತ ಬಳಕೆಯಾಗುವ ಮೊದಲ ಐದು ವೆಬ್ಸೈಟುಗಳಲ್ಲಿ ಇದೂ ಒಂದು.

ನಾಲ್ಕಾರು ವರ್ಷಗಳೇ ಈ ವಿಕಿಪೀಡಿಯದಲ್ಲಿ ಕಳೆದವರಿಗೆ ಎಲ್ಲರೊಡನೆ ಕುಳಿತು ಒಂದು ದಿನದಲ್ಲಿ ವಿಕಿ ಬಗ್ಗೆ ಹಂಚಿಕೊಳ್ಳುವುದು ಬಹುದೊಡ್ಡ ಸವಾಲು. ಏಕೆಂದರೆ, ವಿಕಿ(ಪೀಡಿಯ) ಬಗ್ಗೆ ಹಂಚಿಕೊಳ್ಳಲು ನಮಲ್ಲಿರುವ ವಿಷಯಗಳು ನೂರಾರು. ಮಂಗಳೂರಿನಲ್ಲಿ ರಾಜ್ಯಮಟ್ಟದ ಮೊಟ್ಟಮೊದಲ ವಿಕಿ ಅಕಾಡೆಮಿ ಆಯೋಜಿಸಿದಾಗ ನಮಗೆದುರಾದ ಸವಾಲು ಕೂಡ ಇದೇ. ಅಲ್ಲಿ ಅಂದು ನೆರೆದಿದ್ದ ಇನ್ನೂರಕ್ಕೂ ಹೆಚ್ಚು ಜನ ಆಸಕ್ತರ ಸಮೂಹ ನಮಗಿದ್ದ ಸವಾಲನ್ನು ಇಮ್ಮಡಿಗೊಳಿಸಿತ್ತು.

"ಮಂಗಳೂರು ಆಸ್ಟ್ರೇಲಿಯದಲ್ಲಿ ಕೂಡ ಇದೆ. ಅದರ ಬಗ್ಗೆ ಲೇಖನ ಉಂಟೋ?" ಎಂದು ಸಭಿಕರೊಬ್ಬರು ಪ್ರಶ್ನೆ ಮುಂದಿಟ್ಟಾಗ ಕಾರ್ಯಕ್ರಮ ನಡೆಸಿಕೊಟ್ಟ ನಮಗೂ ಕುತೂಹಲ. ಅಲ್ಲಿಯೇ ಆಂಗ್ಲ ವಿಕಿಯ 'ಮಂಗಳೂರು' ಪುಟ ತೆರೆದು ನೋಡಿದಾಗ ಆಸ್ಟ್ರೇಲಿಯದಲ್ಲಿರುವ 'ಮಂಗಳೂರು' ಎಂಬ ಊರಿನ ಬಗ್ಗೆಯೂ ಮಾಹಿತಿ ಓದಿ ಹೇಳುವಾಗ ಎಲ್ಲಿಲ್ಲದ ಖುಷಿ. ನಮ್ಮೆಲ್ಲರ ನಡುವೆ ಇರುವ ಮಾಹಿತಿಯ ತುಣುಕುಗಳು ಒಟ್ಟಾದಾಗ ಮಾತ್ರ ಹೀಗಾಗಲು ಸಾಧ್ಯ ಅಲ್ವ? ಇಲ್ಲದಿದ್ದರೆ ವಿಕ್ಟೋರಿಯ, ಆಸ್ಟ್ರೇಲಿಯದಲ್ಲಿರುವ ಮಂಗಳೂರಿಗೆ ಒಂದು ರೈಲ್ವೇ ಸ್ಟೇಶನ್ ಕೂಡ ಇದೆ, ಒಂದು ಏರ್ಪೋರ್ಟ್ ಕೂಡ ಇದೆ ಎಂಬುದಿರಲಿ, ಮತ್ತೊಂದು ಮಂಗಳೂರು ಪರದೇಶವೊಂದರಲ್ಲಿದೆ ಎಂಬುದೂ ತಿಳಿದುಬರದು.

ಇದೇ ರೀತಿಯ ಪ್ರಶ್ನೆಗಳು ಉತ್ಸಾಹದ ಕಾರ್ಯಕ್ರಮವನ್ನಾಗಿಸಿತು ಆ ದಿನ. ಮಂಗಳೂರಿನಲ್ಲಿ ನಡೆದ ವಿಕಿ ಅಕಾಡೆಮಿ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚುಳಿಯುವಷ್ಟು.

ವಿಕಿಪೀಡಿಯ ಎಂದರೇನು, ಅದರ ಸಿದ್ಧಾಂತ ಏನು, ಅದರಲ್ಲಿ ಯಾರು ಭಾಗವಹಿಸಬಹುದು, ಹೇಗೆ ಭಾಗವಹಿಸಬಹುದು? ಭಾಗವಹಿಸಲು ಬೇಕಾದದ್ದು ಏನು? ಇದೇ ಮೊದಲಾದ ವಿಷಯಗಳೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದೆವು. ಸೇಂಟ್ ಅಲೋಶಿಯಸ್ ನಲ್ಲಿ ನೆರೆದಿದ್ದ ಆಸಕ್ತರು ನೆರೆದ ಸಂಖ್ಯೆಯಲ್ಲಿ ಒಡ್ಡಿದ ಸವಾಲು ನಮಗೆ ಅಷ್ಟೇ ಉತ್ಸಾಹ ಮೂಡಿಸಿದ್ದು ಹೌದು. ಬಿಳಿಗಿರಿರಂಗನ ಬೆಟ್ಟವನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡಿರುವ ಡಾಕ್ಟರರಾದ ಪ್ರಶಾಂತ್ ಎನ್ ಎಸ್ ನನ್ನ ಜೊತೆ ಕಾರ್ಯಕ್ರಮ ನಡೆಸಿಕೊಟ್ಟವರು. ಇವರ ನಿತ್ಯದ ವಿಕಿಪೀಡಿಯ ಎಡಿಟ್ಸ್ ನೋಡಿದರೆ ಅದಲ್ಲಿರುವ ಅವರಿಗಿರುವ ಆಸಕ್ತಿ ಬಗ್ಗೆ ತಿಳಿಸದೇ ಇರದು.

Wiki Academy                Wiki Academy in Mangalore

ಈ ಯೋಜನೆಯ ಜನಪ್ರಿಯತೆಗೆ ಕಾರಣವೇನು? ಇದು ಹೇಗೆ ಇಷ್ಟು ದೊಡ್ಡದಾಗಿ ಬೆಳದದ್ದು? ವಿಕಿಪೀಡಿಯ ಎಂಬುದೊಂದು ಇಷ್ಟು ಅದ್ಭುತವಾದ ಯೋಜನೆಯಾದದ್ದು ಹೇಗೆ - ಮುಂತಾದ ವಿಷಯಗಳ ಬಗ್ಗೆ ನಾವು ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆವು. ಸಹಯೋಗದಲ್ಲಿ (Collaboration) ಮಾಡಿದ ಕೆಲಸ ಹೇಗೆ ಜಗತ್ ಸ್ವರೂಪ ಪಡೆದು ಉತ್ತಮವಾಗುತ್ತ ಹೋಗುತ್ತದೆ ಹಾಗು ವಿಶ್ವ ಮಟ್ಟದಲ್ಲಿ ಇದು ಹೇಗೆ ಕಾಣುತ್ತದೆ ಎಂಬುದರ ಕುರಿತು ಮಾತಾನಾಡಲು ಪ್ರಯತ್ನಿಸಿದೆವು. ರಾಜ್ಯಮಟ್ಟದಲ್ಲಿ ಪ್ರಾರಂಭಿಸುವಾಗ ನಮ್ಮ ಭಾಷೆ ಕನ್ನಡದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಪ್ರಾರಂಭವಾಗಿರುವ ವಿಕಿಪೀಡಿಯ ಆವೃತ್ತಿ ಮರೆಯಲಾಗದು, ಅದರ ಕುರಿತು ಕೂಡ ಚರ್ಚೆ ಮಾಡಿದೆವು. ವಿಕಿಪೀಡಿಯ ಬಹುಭಾಷಾ ವಿಶ್ವಕೋಶ್ವವಾಗಿ ರೂಪುಗೊಳ್ಳುತ್ತಿರುವ ಕುರಿತು, ಅದರ ಪ್ರಾಮುಖ್ಯತೆ ಕುರಿತು ಕೂಡ ಮಾತನಾಡಿದೆವು.

ಮಧ್ಯಾಹ್ನ ವಿಕಿಪೀಡಿಯ ಬಳಸುವುದು ಹೇಗೆ, ಈ ಯೋಜನೆಯಲ್ಲಿ ಪಾಲ್ಗೊಳ್ಳುವುದು ಹೇಗೆ ಎಂಬುದರ ಕುರಿತು ಕಾರ್ಯಾಗಾರವಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸ್ವತಃ ಮುಂದೆ ಬಂದು ವಿಕಿಪೀಡಿಯದಲ್ಲಿ ತಾವೂ ಒಂದು ಅಕೌಂಟು ತೆರೆದು ಎಡಿಟ್ ಮಾಡುವಂತೆ ಮಾಡಿದೆವು. ಇದು ಸಭೆಯಲ್ಲಿ ನೆರೆದಿದ್ದ ಹಲವರಿಗೆ ಬಹಳ ಖುಷಿಕೊಟ್ಟ ವಿಷಯವೆಂದು ಈಗ ನಾನು ಹೇಳಬಲ್ಲೆ. ಏಕೆಂದರೆ ಯಾವುದೇ ಯೋಜನೆಯಾಗಲಿ, ತಂತ್ರಜ್ಞಾನವಾಗಲಿ - ಅದರ ಬಗ್ಗೆ ಕೇಳುವುದು ಸುಲಭ, ಆದರೆ ಬಳಸಿ ನೋಡುವಾಗ ಸಮಸ್ಯೆ ಎದುರಾದಾಗ ಕಷ್ಟ! ನೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನೇ ಭಾಗವಹಿಸಲು ಕೇಳುತ್ತ ಅವರ ಕೈಯಲ್ಲೇ ಅಕೌಂಟು ತೆರೆಯುವಂತೆ ಮಾಡುವುದು, ಪುಟವೊಂದನ್ನು ಎಡಿಟ್ ಮಾಡುವಂತೆ ಮಾಡುವುದು - ಸಭಿಕರಲ್ಲಿ ಪ್ರಶ್ನೆಗಳ ಸರಮಾಲೆಯನ್ನೇ ಹುಟ್ಟುಹಾಕಿತು! ನಮಗೂ ಅದೇ ಬೇಕಿದ್ದದ್ದು. ಎಲ್ಲರ ಪ್ರಶ್ನೆಗಳಿಗೆ ನಮಗೆ ತಿಳಿದ ಉತ್ತರ ನೀಡುತ್ತ ಅವರಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದೆವು. ಒಟ್ಟಾರೆ, ನಮಗದು ಬಹಳ ಖುಷಿಕೊಟ್ಟ ಕಾರ್ಯಾಗಾರ!

ದಿನದ ಕಾರ್ಯಕ್ರಮ ಮುಗಿದ ಮೇಲೆ ವಿದ್ಯಾರ್ಥಿಗಳು, ಉಪನ್ಯಾಸಕರು, ಪತ್ರಕರ್ತರು - ಎಲ್ಲ ನಮ್ಮಲ್ಲಿ ಬಂದು ವಿಕಿಪೀಡಿಯದೊಂದಿಗೆ ಅವರ ಅನುಭವ ಹಂಚಿಕೊಳ್ಳುತ್ತ ಕಳೆದ ಸಮಯವಂತೂ ಮರೆಯಲಾಗದ್ದು. ತಂತ್ರಜ್ಞರಾಗಿ ನಾವು ಕಾಣುವ ವಿಕಿಪೀಡಿಯ ಎಲ್ಲರಿಗೂ ತನ್ನದೇ ಮುಖವನ್ನು ಕಾಣಿಸುತ್ತದೆಂಬ ಅರಿವು ಈ ಯೋಜನೆಯ ಸಮಗ್ರತೆಯ ಪರಿಚಯ ಹೆಚ್ಚಿಸಿತು. ವಿಕಿಪೀಡಿಯ ನಮ್ಮೆಲ್ಲರಿಗೂ ಮತ್ತಷ್ಟು ಹತ್ತಿರವಾಯಿತು.

[ವಿಕಿ ಅಕಾಡೆಮಿಯನ್ನು ಸಾಧ್ಯವಾಗಿಸುತ್ತಿರುವ ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿಯವರಿಗೆ ವಿಕಿಪೀಡಿಯ ಸಮುದಾಯದ ಪರವಾಗಿ ಅಭಿನಂದನೆಗಳು. ಹೆಚ್ಚಿನದೇನೂ ಅಪೇಕ್ಷೆಯಿಲ್ಲದೆ ವಿಕಿಪೀಡಿಯದ ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ವಿಕಿ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಮ್ಮೆಲ್ಲರ ಪ್ರಯತ್ನದಲ್ಲಿ ಇವರ ಪಾತ್ರ, ಕೊಡುಗೆ ಗಣನೀಯವಾದದ್ದು.

ಮಂಗಳೂರಿನ ಆವೃತ್ತಿಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಂಗಳೂರು ಆಕಾಶವಾಣಿಯ ಸಾತ್ವಿಕ್, ಸೇಂಟ್ ಅಲೋಶಿಯಸ್ ಕಾಲೇಜಿನ ಉತ್ಸುಕ ಉಪನ್ಯಾಸಕರೂ, ಸರಳ ಜೀವಿಯೂ ಆದ ರೆವರೆಂಡ್ ಫಾದರ್ ರಿಚರ್ಡ್ ರೆಗೋ ಇವರಿಬ್ಬರಿಗೂ ನಮ್ಮೆಲ್ಲರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಇದೆಲ್ಲದರ ಜೊತೆಗೆ ವಿಕಿ ಅಕಾಡೆಮಿಯನ್ನು ಕುತೂಹಲದಿಂದ, ವಿಶ್ವಾಸದಿಂದ ನೋಡುತ್ತ ವಿಕಿ ಕುರಿತು ಮಾಹಿತಿ ಹಂಚಿಕೊಳ್ಳುವಲ್ಲಿ ತಮ್ಮದೂ ಒಂದು ಪಾತ್ರವಿದೆ ಎಂಬಂತೆ ನಡೆದ ಪತ್ರಕರ್ತ ಸ್ನೇಹಿತರಿಗೆ ನಾವೆಲ್ಲರೂ ಕೃತಜ್ಞರು. ಇವರಿಲ್ಲದೆ ನಾವು ಕೈಗೆತ್ತಿಕೊಂಡಿರುವ ಅರಿವು ಹಂಚಿಕೊಳ್ಳುವ ಅಭಿಯಾನ ಅಪೂರ್ಣ.

More information available here

Seminar held at Managlore - slides available here

 

Filed under: ,
The views and opinions expressed on this page are those of their individual authors. Unless the opposite is explicitly stated, or unless the opposite may be reasonably inferred, CIS does not subscribe to these views and opinions which belong to their individual authors. CIS does not accept any responsibility, legal or otherwise, for the views and opinions of these individual authors. For an official statement from CIS on a particular issue, please contact us directly.