Centre for Internet & Society

More information on press coverage on the workshop held in Mangalore on Wiki Academy

Pre-event:

Press Coverage:

Post-event:

Press Coverage, Blogs:

Translation of press account:

ಮಂಗಳೂರಿನಲ್ಲಿ ವಿಕಿಮೀಡಿಯಾ ಕಾರ್ಯಾಗಾರ
(ಆಸ್ಟ್ರೇಲಿಯಾದಲ್ಲೂ ಮಂಗಳೂರು ಉಂಟು!)
ತುಂಬಿದ ಸಭೆಯ ನಡುವಿನಿಂದ ಒಬ್ಬ ವ್ಯಕ್ತಿ ಕೇಳಿದ ಪ್ರಶ್ನೆ ಎಲ್ಲರನ್ನೂ ಚಕಿತಗೊಳಿಸಿತು. 'ಮಂಗಳೂರು ಅಂತ ನೀವು ಹೇಳೋದು ಯಾವ ಊರಿನ ಬಗ್ಗೆ? ಅದು ಕರ್ನಾಟಕದ ಕಡಲನಗರಿ ಮಂಗಳೂರಾ ಅಥವಾ ಆಸ್ಟ್ರೇಲಿಯಾದ ಪಟ್ಟಣದ ಬಗ್ಗೆಯಾ?'
ವೇದಿಕೆ ಮೇಲಿದ್ದ ಸಂಪನ್ಮೂಲ ವ್ಯಕ್ತಿಗಳಾದ ಹರಿ ಪ್ರಸಾದ ನಾಡಿಗ್‌ ಮತ್ತು ಜಿ.ಎನ್‌. ಪ್ರಶಾಂತ್ ಸೇರಿದಂತೆ ಎಲ್ಲರೂ ಅರೆಕ್ಷಣ ಅವಾಕ್ಕಾದರು.
ಆಗಸ್ಟ್‌ ೨೧ ಹಾಗೂ ೨೨ರಂದು ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಿ ಮೀಡಿಯಾ ಕಾರ್ಯಾಗಾರ ಶುರುವಾಗಿದ್ದು ಹೀಗೆ. ಕಾಲೇಜಿನ ಪತ್ರಿಕೋದ್ಯಮ ಮತ್ತು ಸಂವನಹ ವಿಭಾಗ, ಬೆಂಗಳೂರಿನ ವಿಕಿ ಮೀಡಿಯಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಾಗಾರ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹೀಗಾಗಿ, ಸಭೆ ಪ್ರಾರಂಭವಾಗುತ್ತಲೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಶುರುವಾದವು.
'ಮಂಗಳೂರಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲು ತುಂಬ ಸಂತಸವಾಗುತ್ತಿದೆ' ಎಂದು ಮಾತು ಶುರು ಮಾಡಿದ ಪ್ರಶಾಂತ್, ವಿಕಿಪೀಡಿಯಾದ ವಿಶೇಷತೆಗಳ ಬಗ್ಗೆ ವಿವರಿಸಿದರು. 'ಇಲ್ಲಿ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು, ಎಡಿಟ್ ಮಾಡಬಹುದು, ಇದು ಮಾಹಿತಿ ಕೋಶ ಇದ್ದಂತೆ. ನಿತ್ಯ, ಹೊಸ ಮಾಹಿತಿ ಸೇರ್ಪಡೆಯಾಗುತ್ತಲೇ ಇರುತ್ತದೆ' ಎಂದೆಲ್ಲ ಹೇಳಿದರು. 'ಮಂಗಳೂರು ಕುರಿತು ವಿಕಿಪೀಡಿಯಾದಲ್ಲಿ ಸುಮಾರು ೨೫ ಭಾಷೆಗಳಲ್ಲಿ ಪ್ರಸ್ತಾಪ ಇದೆ' ಎಂದು ಹೇಳುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಹೆಮ್ಮೆ, ರೋಮಾಂಚನ.
ಆಗ ಬಂದಿದ್ದೇ ಎಲ್ಲರನ್ನೂ ಚಕಿತಗೊಳಿಸಿದ ಪ್ರಶ್ನೆ: ಸಭೆಯ ನಡುವಿನಿಂದ ಎದ್ದು ನಿಂತ ಪ್ರೇಕ್ಷಕರೊಬ್ಬರು, 'ನೀವು ಪ್ರಸ್ತಾಪಿಸುತ್ತಿರುವುದು ಯಾವ ಮಂಗಳೂರಿನ ಬಗ್ಗೆ? ಕರ್ನಾಟಕದ ಮಂಗಳೂರಾ ಅಥವಾ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಮಂಗಳೂರಾ?' ಎಂದು ಪ್ರಶ್ನಿಸಿದಾಗ, ಸಂಪನ್ಮೂಲ ವ್ಯಕ್ತಿಗಳಾದ ಹರಿ ಪ್ರಸಾದ್ ನಾಡಿಗ್‌ ಮತ್ತು ಜಿ.ಎನ್‌. ಪ್ರಶಾಂತ್ ಅಷ್ಟೇ ಅಲ್ಲ, ವೇದಿಕೆಯ ಮೇಲಿದ್ದ ಪ್ರಾಚಾರ್ಯರಾದ ಸ್ವೆಬೆರ್ಟ್‌ ಡಿಸಿಲ್ವಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಿಚರ್ಡ್‌ ರೇಗೊ ಕೂಡ ಚಕಿತರಾದರು.
ತಕ್ಷಣ ವಿಕಿಪೀಡಿಯಾದಲ್ಲಿ ಮಂಗಳೂರು ಶಬ್ದ ಟೈಪಿಸಿ ಶೋಧ ನಡೆಸಲಾಯಿತು. ಕರ್ನಾಟಕದ ಮಂಗಳೂರಿನ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ, ಅಲ್ಲಿ ಆಸ್ಟ್ರೇಲಿಯಾದ ಮಂಗಳೂರು ಎಂಬ ಪಟ್ಟಣದ ಬಗ್ಗೆಯೂ ಪ್ರಸ್ತಾಪವಿರುವ ಅಂಶ ಬೆಳಕಿಗೆ ಬಂತು. ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಮಂಗಳೂರಿನಲ್ಲಿ ರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣವೂ ಇದೆ ಎಂಬ ವಿಷಯ ಗೊತ್ತಾಯಿತು. ಅದನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ನಮ್ಮೂರಿನ ಹೆಸರಿನದೇ ಇನ್ನೊಂದು ಊರು ದೂರದ ದೇಶದಲ್ಲಿದೆ ಎಂಬ ಅಂಶ ತಿಳಿದುಕೊಂಡ ಸಂಭ್ರಮ.
ಇಂಥ ಹಲವಾರು ವಿಷಯಗಳಿಗೆ ಎರಡು ದಿನದ ವಿಕಿಮೀಡಿಯಾ ಕಾರ್ಯಾಗಾರ ಸಾಕ್ಷಿಯಾಯಿತು. 'ಒಂದೇ ಹೆಸರಿನ ಎರಡು ಸ್ಥಳಗಳ ವಿಷಯ ಬಂದಾಗ, ವಿಕಿಪೀಡಿಯಾ ಅದನ್ನು ಸ್ಪಷ್ಟವಾಗಿ ಗುರುತಿಸಿ ನಿಮ್ಮೆದುರು ಆಯ್ಕೆಗಳನ್ನು ಇರಿಸುತ್ತದೆ. ನಿಮಗೆ ಬೇಕಾದ ಸ್ಥಳದ ಮಾಹಿತಿಯನ್ನು ನೀವಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು' ಎಂದರು ಪ್ರಶಾಂತ್ ಮತ್ತು ನಾಡಿಗ್. ವಿವಾದಾತ್ಮ,ಕ ವಿಷಯಗಳ ಕುರಿತಂತೆ ವಿಕಿಪೀಡಿಯಾ ಸ್ಪಷ್ಟ ನಿಲುವು ಹೊಂದಿದೆ. 'ಸಂಬಂಧಿಸಿದ ಬರಹ ಪೂರ್ಣವಲ್ಲ, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಅಥವಾ ಇನ್ನೂ ನಿಖರವಾದ ಮಾಹಿತಿಯನ್ನು ಒದಗಿಸಬಹುದು ಎಂದು ಸ್ಪಷ್ಟಪಡಿಸುತ್ತದೆ. ಎಷ್ಟೋ ವಿಷಯಗಳಿಗೆ ಸಂಬಂಧಿಸಿದಂತೆ, ಇಲ್ಲಿಯ ಬರವಣಿಗೆ ವಿಕಿಮೀಡಿಯಾ ಒಪ್ಪಿದ ಮಾದರಿಯಲ್ಲಿಲ್ಲ. ನೀವದನ್ನು ಸೂಕ್ತವಾಗಿ ಬದಲಾಯಿಸಬಹುದು ಎಂಬ ಸೂಚನೆ ಪ್ರಕಟಿಸಿರುತ್ತದೆ. ಹೀಗಾಗಿ, ಇದು ನಿತ್ಯ ಬದಲಾಗುವ, ಸಮೃದ್ಧವಾಗುವ ವಿಶ್ವಕೋಶ' ಎಂದರು ಅವರು.
ಕನ್ನಡ ವಿಕಿಪೀಡಿಯಾದ ಪ್ರಾರಂಭದ ದಿನದಿಂದ ಸಕ್ರಿಯವಾಗಿ ಪಾಲ್ಗೊಂಡಿರುವ ಹರಿ ಪ್ರಸಾದ್‌ ನಾಡಿಗ್‌ ವಿಕಿಪೀಡಿಯಾದ ಹುಟ್ಟು, ಬೆಳವಣಿಗೆ, ನೀತಿ, ಪಾಲ್ಗೊಳ್ಳುವಿಕೆ ಮುಂತಾದವನ್ನು  ವಿವರಿಸಿದರು. ವಿಷಯವನ್ನು ಸೇರಿಸುವುದು ಹೇಗೆ? ಎಡಿಟ್‌ ಹೇಗೆ ಮಾಡಬೇಕು? ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಂದಲೇ ಎಡಿಟ್ ಮಾಡಿಸಿದರು. ವಿಕಿಪೀಡಿಯಾ ಬರಹಗಳಲ್ಲಾದ ಪ್ರತಿಯೊಂದು ಬರವಣಿಗೆಯನ್ನೂ ನಿರ್ವಾಹಕರಾಗಿ ಕೆಲಸ ಮಾಡುವ ಸ್ವಯಂ ಸೇವಕರು ಪರಿಶೀಲಿಸುತ್ತಾರೆ. ಹೀಗಾಗಿ, ಗುಣಮಟ್ಟ ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ ಎಂದು ನಾಡಿಗ್ ವಿವರಿಸಿದರು.
ಕಾರ್ಯಾಗಾರದಲ್ಲಿ ಬೆಳಕಿಗೆ ಬಂದ ಮತ್ತೊಂದು ಮಹತ್ವದ ವಿಷಯವೆಂದರೆ, ವಿದ್ಯಾರ್ಥಿಯೊಬ್ಬ ಈಗಾಗಲೇ ಹಲವಾರು ಲೇಖನಗಳನ್ನು ಸೇರಿಸಿರುವುದು. ಮಿಲಿಟರಿಗೆ ಸಂಬಂಧಿಸಿದಂತೆ ತಾನು ಬರೆದಿರುವ ಲೇಖನಗಳನ್ನು ಆತ ತೋರಿಸಿದಾಗ ಎಲ್ಲರಿಗೂ ಆಶ್ಚರ್ಯ. ಜೊತೆಗೆ, ತಾವು ಕೂಡಾ ಈ ರೀತಿ ಸಕ್ರಿಯರಾಗಬಹುದು ಎಂಬ ಖುಷಿ.
ವಿಕಿಪೀಡಿಯಾದ ಹಲವಾರು ಸಾಧ್ಯತೆಗಳ ಕುರಿತೂ ಕಾರ್ಯಾಗಾರದಲ್ಲಿ ವಿವರಿಸಲಾಯ್ತು. 'ಯಾರು, ಯಾವ ವಿಷಯದ ಬಗ್ಗೆಯೂ ಲೇಖನ ಬರೆಯಬಹುದು, ಬರೆದಿದ್ದನ್ನು ಎಡಿಟ್ ಮಾಡಬಹುದು, ಅಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಪ್ರಶ್ನಿಸಬಹುದು, ಚರ್ಚೆ ನಡೆಸಬಹುದು. ಈ ಎಲ್ಲ ಕೆಲಸದಿಂದ ಸಿಗುವ ಲಾಭವೆಂದರೆ, ತೃಪ್ತಿ' ಎಂದರು ಪ್ರಶಾಂತ್ ಮತ್ತು ಹರಿ ಪ್ರಸಾದ ನಾಡಿಗ್‌.
ವಿಕಿಪೀಡಿಯಾ ಕನ್ನಡ ಆವೃತ್ತಿಯಲ್ಲಿ ಈಗಾಗಲೇ ೬,೫೦೦ಕ್ಕಿಂತ ಹೆಚ್ಚು ಲೇಖನಗಳಿವೆ. ನಿತ್ಯ ಹೊಸ ಲೇಖನಗಳು ಸೇರ್ಪಡೆಯಾಗುವುದರ ಜೊತೆಗೆ, ಹಲವಾರು ಲೇಖನಗಳು ಪುನರ್ ಸಂಪಾದನೆಯಾಗುತ್ತಲೇ ಇವೆ. ಇದೊಂದು ಚಲನಶೀಲ ತಾಣ ಎಂಬುದನ್ನು ಕಾರ್ಯಾಗಾರ ಬಿಂಬಿಸಿತು. ಹಲವಾರು ವಿದ್ಯಾರ್ಥಿಗಳು ವಿಕಿಪೀಡಿಯಾ ಕೆಲಸದಲ್ಲಿ ನಿಯಮಿತವಾಗಿ ತೊಡಗುವ ಉತ್ಸಾಹ ತೋರಿದರು.
ಎರಡು ದಿನಗಳ ಅವಧಿಯಲ್ಲಿ ಅವರ ಪಾಲಿಗೆ ಹೊಸ ಜಗತ್ತೊಂದು ತೆರೆದುಕೊಂಡಿತ್ತು.