ಕೃಷಿ ಸಂಪದ - ಇ-ಮ್ಯಾಗಜೀನ್ ಬಿಡುಗಡೆ
ಪರಿಸರ ಬರಹಗಾರ ನಾಗೇಶ್ ಹೆಗಡೆ ಅವರು ಕಂಪ್ಯೂಟರಿನ ಸ್ವಿಚ್ ಒತ್ತಿ ಪರದೆಯಲ್ಲಿ ಡಿಜಿಟಲ್ ಪುಟ ಬೆಳಗಿ "ಕೃಷಿ ಸಂಪದ" ಇ-ಮ್ಯಾಗಜೀನನ್ನು ಇಂಟರ್ನೆಟ್ ಲೋಕಕ್ಕೆ ಅರ್ಪಿಸಿದರು.
"ನಮ್ಮ ಪಾರಂಪರಿಕ ಜ್ಞಾನವನ್ನು ರಕ್ಷಿಸಲಿಕ್ಕಾಗಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನದ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಇಂಟರ್ನೆಟ್ನಲ್ಲಿ ಪ್ರಕಟವಾಗುವ ಇ-ಮ್ಯಾಗಜೀನಗಳು ಈ ನಿಟ್ಟಿನಲ್ಲಿ ಪ್ರಧಾನಪ್ರಾತ್ರವಹಿಸಬಲ್ಲವು. ಅದಕ್ಕಾಗಿ ಕನ್ನಡದ ಮೊದಲ ಕೃಷಿ ಇ-ಮ್ಯಾಗಜೀನ್ "ಕೃಷಿ ಸಂಪದ" ವನ್ನು ಇಂದು ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ" ಎಂಬ ಮಾತುಗಳೊಂದಿಗೆ ಪರಿಸರ ಬರಹಗಾರ ನಾಗೇಶ್ ಹೆಗಡೆ ಅವರು ಕಂಪ್ಯೂಟರಿನ ಸ್ವಿಚ್ ಒತ್ತಿ ಪರದೆಯಲ್ಲಿ ಡಿಜಿಟಲ್ ಪುಟ ಬೆಳಗಿ "ಕೃಷಿ ಸಂಪದ" ಇ-ಮ್ಯಾಗಜೀನನ್ನು ಇಂಟರ್ನೆಟ್ ಲೋಕಕ್ಕೆ ಅರ್ಪಿಸಿದರು.
ನಲವತ್ತು ವರುಷಗಳ ಮುಂಚೆ ಯು.ಎಸ್.ಎ ದೇಶದ ಗಗನಯಾತ್ರಿಗಳು ಚಂದ್ರನ ನೆಲದಲ್ಲಿ ಪ್ರಪ್ರಥಮ ಭಾರಿ ಪಾದಾರ್ಪಣೆ ಮಾಡಿದರು. ಇಡೀ ಜಗತ್ತು ಆ ಘಟನೆಯನ್ನು ಕಾತರದಿಂದ ನಿರೀಕ್ಷಿಸುತ್ತಿತ್ತು. ಮಾನವನೊಬ್ಬ ಚಂದ್ರನ ಮೇಲಿಟ್ಟ ಪುಟ್ಟ ಹೆಜ್ಜೆ ಮನುಕುಲದ ವೈಜ್ಞಾನಿಕ ಪ್ರಗತಿಯ ಪಯಣದ ಪರ್ವತ ಹೆಜ್ಜೆ. ಆ ಕ್ಷಣದಲ್ಲಿ ಭೂಲೋಕದ ಜನರೆಲ್ಲ ಸಂಭ್ರಮಿಸಿದ್ದರು. ಅದೇ ಸಂದರ್ಭದಲ್ಲಿ ಯು.ಎಸ್.ಎ ದೇಶದ ಮಿಲಿಟರಿ ಇನ್ನೊಂದು ಬೃಹತ್ ಯೋಜನೆಯಲ್ಲಿ ಮುಳುಗಿತ್ತು - ರಷ್ಯಾ ದೇಶದಿಂದ ಪರಮಾಣು ಬಾಂಬ್ ದಾಳಿ ನೆಡೆದರೆ, ಯು.ಎಸ್.ಎ ದೇಶದ ಸರಕಾರ, ಸೇನಾಪಡೆಗಳು ಹಾಗು ವೈಜ್ಞಾನಿಕ ಪ್ರಗತಿಗೆ ಸಂಬಂಧಿಸಿದ ಅಗಾಧ ಮಾಹಿತಿಯನ್ನು ರಕ್ಷಿಸುವ ಯೋಜನೆ ಅದಾಗಿತ್ತು. ಅದಕ್ಕಾಗಿ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ಇರಿಸಿದ ಕಂಪ್ಯೂಟರ್ ಗಳಲ್ಲಿ ಶೇಖರಿಸಿಟ್ಟರು. ಒಂದು ಕಂಪ್ಯೂಟರ್ ಬಾಂಬ್ ದಾಳಿಯಿಂದ ನಾಶವಾದರೂ ಉಳಿದ ಮೂರು ಕಂಪ್ಯೂಟರ್ಗಳಲ್ಲಿ ಅಗಾಧ ಮಾಹಿತಿ ಸುರಕ್ಷಿತವಾಗಿ ಉಳಿದಿರುತ್ತಿತ್ತು. ಈ ಪ್ರಾಜೆಕ್ಟಿಗೆ ಅರ್ಪಾನೆಟ್(ARPANET) ಎಂದು ಹೆಸರಿಡಲಾಗಿತ್ತು.ಇದುವೇ ಮುಂದೆ ಇಂಟರ್ನೆಟ್ ಆಗಿ ಬೆಳೆಯಿತು. ಇಂದು ಕನ್ನಡದ ಮಟ್ಟಿಗೆ ಅದೇ ರೀತಿಯ ಸಂಭ್ರಮ. ಕೃಷಿ ಹಾಗು ಗ್ರಾಮೀಣರಂಗಗಳ ಅಗಾಧ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಮಹಾತ್ವಾಕಾಂಕ್ಷೆಯ "ಕೃಷಿ ಸಂಪದ" ಯೋಜನೆ ಅನಾವರಣಗೊಂಡದ್ದು ನಾವೆಲ್ಲ ಹೆಮ್ಮೆ ಪಡಬೇಕಾದ ಬೆಳವಣಿಗೆ ಎಂದು ನಾಗೇಶ್ ಹೆಗಡೆಯವರು ಅಭಿಪ್ರಾಯಪಟ್ಟರು.
ಸಾವಿರಾರು ಕನ್ನಡ ಅಭಿಮಾನಿಗಳು ಸದಸ್ಯರಾಗಿರುವ ಇಂಟರ್ನೆಟ್ ಸಮುದಾಯ "ಸಂಪದ". ಇದರದೇ ಒಂದು ಭಾಗವಾದ ಕೃಷಿ ಸಂಪದದ ಹೊಸದೊಂದು ಯೋಜನೆ "ಕೃಷಿ ಸಂಪದ" ಎಂಬ ಇ-ಮ್ಯಾಗಜೀನ್. ಇದು "ಕ್ರಿಯೇಟೀವ್ ಕಾಮನ್ಸ್" ಲೈಸೆನ್ಸ್ ನಲ್ಲಿ ಪ್ರಕಟವಾಗುತ್ತಿರುವ ಪ್ರಥಮ ಕನ್ನಡದ ಇ-ಮ್ಯಾಗಜೀನ್. ಆದ್ದರಿಂದ ಇದರಲ್ಲಿರುವ ಕಂಟೆಂಟನ್ನು (ಬರಹಗಳು, ಪೊಟೋಗಳು ಇತ್ಯಾದಿ) ಯಾರುಬೇಕಾದರೂ "ಇದ್ದದ್ದು ಇದ್ದ ಹಾಗೆ" ಮರುಬಳಕೆ ಮಾಡಬಹುದು. ಅಂದರೆ ಲಾಭರಹಿತ ಉದ್ದೇಶಗಳಿಗಾಗಿ ಮರುಪ್ರಕಟಿಸಬಹುದು ಅಥವಾ ಪ್ರತಿಗಳನ್ನು ತೆಗೆದು ಆಸಕ್ತರಿಗೆ ಹಂಚಬಹುದು ಎಂದು "ಸಂಪದ" ತಂಡದ ಪರವಾಗಿ ಹರಿಪ್ರಸಾದ್ ನಾಡಿಗ್ ಆರಂಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಸಂಪದದ ಸಂಪಾದಕರಾದ ಅಡ್ಡೂರು ಕೃಷ್ಣರಾವ್ ರವರು, ಕೃಷಿ ಹಾಗು ಗ್ರಾಮೀಣ ಬದುಕಿನ ಬಗ್ಗೆ ಕಾಳಜಿಯಿರುವ ಎಲ್ಲರಿಗೂ ವೇದಿಕೆ ಒದಗಿಸುವ ಉದ್ದೇಶದಿಂದ ಇ-ಮ್ಯಾಗಜೀನ್ ಅನ್ನು ಆರಂಭಿಸಲಾಗಿದೆ ಎಂದು ತಿಳಿಸಿ, ಇದರ ಉದ್ದೇಶಗಳನ್ನು ವಿವರಿಸಿದರು.
ಬೆಂಗಳೂರಿನ "ಕೃಷಿ ತಂತ್ರಜ್ಞರ ಸಂಸ್ಥೆ" ಯಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಹಲವಾರು ಆಸಕ್ತರು ಭಾಗವಹಿಸಿದ್ದರು. "ಕೃಷಿ ಸಂಪದ" ಬಿಡುಗಡೆಯ ಬಳಿಕ ಜರುಗಿದ ಸಂವಾದದಲ್ಲಿ ಚುರುಕಿನ ಪ್ರಶ್ನೋತ್ತರ ಜರುಗಿತು. ಕಾರ್ಯಕ್ರಮ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ಸಂಪದ ಹಾಗು ಕೃಷಿ ತಂತ್ರಜ್ಞರ ಸಂಸ್ಥೆ - ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಇ-ಮ್ಯಾಗಜೀನ್ ಪ್ರತಿಯನ್ನು ಕೃಷಿ ಸಂಪದದ ತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ: http://krushi.sampada.net
ನಿಮ್ಮ ಅನಿಸಿಕೆ ಇತ್ಯಾದಿಗಳನ್ನು ಕೃಷಿಸಂಪದ ತಂಡಕ್ಕೆ ಇ-ಮೈಲ್ ಮೂಲಕ ಕಳುಹಿಸಿ ಕೊಡಬಹುದಾಗಿದೆ: [email protected]