ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ ಸಮಾವೇಶ ಮತ್ತು ತರಬೇತಿಯ ವರದಿ
ಕನ್ನಡ ಭಾಷೆಯು ದಿನದಿಂದ ದಿನಕ್ಕೆ ಬಳಕೆಯಿಲ್ಲದೇ ಕುಂದುತ್ತಿದೆ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಮಕ್ಕಳಿಗೆ ಸರಿಯಾದ ಕನ್ನಡ ಆಕರಗಳು ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ, ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಸಂತ ಅಲೋಶಿಯಸ್ ಕಾಲೇಜಿನ ಆಶ್ರಯದಲ್ಲಿ ದಿನಾಂಕ ೦೯ ಹಾಗೂ ೧೦ ನೇ ಫೆಬ್ರುವರಿ, ೨೦೧೯ ರಂದು ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ ಸಮಾವೇಶ ಮತ್ತು ತರಬೇತಿಯನ್ನು ನಡೆಸಲಾಯಿತು.
ಕನ್ನಡ ವಿಕಿಪೀಡಿಯ ಶಿಕ್ಷಣವನ್ನು ತಮ್ಮಸಂಸ್ಥೆಗಳಲ್ಲಿ ಪ್ರಾರಂಭಿಸಬೇಕೆನ್ನುತ್ತಿರುವ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ವಿಕಿಪೀಡಿಯಾದ ಪರಿಚಯ ಮಾಡಿಕೊಡುವುದು ಹಾಗೂ ತರಬೇತಿ ನೀಡುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿತ್ತು. ಮೊದಲ ದಿನ ಕನ್ನಡ ವಿಕಿಪೀಡಿಯ ಶಿಕ್ಷಣವನ್ನು ಪ್ರಾರಂಭಿಸಿರುವ ಸಂಸ್ಥೆಗಳಿಂದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ಪ್ರಾಧ್ಯಾಪಕರನ್ನು ಆಹ್ವಾನಿಸಿ, ಅವರಿಂದ ವಿಕಿಪೀಡಿಯಾದ ಬಗ್ಗೆ ಪರಿಚಯಿಸಿಕೊಡಲಾಯಿತು. ವಿಶ್ವಕನ್ನಡ ಪತ್ರಿಕೆಯ ಸಂಪಾದಕರಾದ ಡಾ. ಪವನಜ ಅವರು ಸವಿಸ್ತಾರವಾಗಿ ವಿಕಿಪೀಡಿಯಾದ ಬಗ್ಗೆ ತಿಳುವಳಿಕೆ ನೀಡಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಮಹಾದೇವಪ್ಪ ಹೆಚ್. ಹಾಗೂ ಧನ್ಯ ಭಾರದ್ವಾಜ್ ಎಂಬ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ, ಕರ್ನಾಟಕವಲ್ಲದೇ ಅಂತರಾಷ್ಟೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಬಗ್ಗೆ ಅಚ್ಚುಕಟ್ಟಾದ ಪರಿಚಯ ಮಾಡಿಕೊಟ್ಟರು. ವಿಶ್ವವಿದ್ಯಾಲಯದ ವಿ.ಶಿ.ಯೋಜನೆಯ ಪ್ರಾರಂಭದಿಂದ ಇಲ್ಲಿಯವರೆಗಿನ ಬೆಳೆದುಕೊಂಡು ಬಂದ ರೀತಿಯೊಂದಿಗೆ ಎಲ್ಲ ಅಂಕಿ-ಅಂಶಗಳನ್ನು ಮಹಾದೇವಪ್ಪ ಮಂಡಿಸಿದರೆ, ವಿದ್ಯಾರ್ಥಿಗಳ ನಿಲುವುಗಳನ್ನು ಧನ್ಯ ವಿವರಿಸಿದರು.
ಇದರೊಂದಿಗೆ, ಉಜಿರೆಯ ಎಸ್.ಡಿ.ಎಮ್ ಹಾಗೂ ಮೂಡಿಬಿದಿರೆಯ ಆಳ್ವಾಸ್ ಸಂಸ್ಥೆಯವರು ಕೂಡ ತಮ್ಮ ವಿ.ಶಿ. ಯೋಜನೆಯ ಬಗ್ಗೆ ವಿವರಿಸಿದರು. ಹೀಗೆ ಎಲ್ಲ ಬಗೆಯ ಮಾಹಿತಿಗಳನ್ನು ಒದಗಿಸುವ ಮೂಲಕ ಮೊದಲ ದಿನದ ಸಮಾವೇಶ ಮುಕ್ತಾಯಗೊಂಡಿತು.
ಎರಡನೇಯ ದಿನ, ಪವನಜರ ಮುಂದಾಳತ್ವದಲ್ಲಿ ಎಲ್ಲ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರುಗಳಿಗೆ ಆನ್ಲೈನ್ ತರಬೇತಿಯನ್ನು ನೀಡುವ ಮೂಲಕ ವಿವಿಧ ಕಾಲೇಜುಗಳಲ್ಲಿ ವಿ.ಶಿ.ಯೋಜನೆ ಪ್ರಾರಂಭಿಸಲು ಸಹಕಾರ ನೀಡಲಾಯಿತು. ಎರಡು ದಿನಗಳ ಕಾಲ, ಹಾಜರಿದ್ದ ಎಲ್ಲರಿಗೂ ಉತ್ತಮವಾದ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೊನೆಗೆ, ಸ್ವಾಗತದಷ್ಟೇ ಆದರದಿಂದ ಎಲ್ಲರನ್ನು ಬೀಳ್ಕೊಡಲಾಯಿತು.